UN networks
ಉಳ್ಳಾಲ: ನಮ್ಮ ಜೀವನದಲ್ಲಿ ಇತರರಿಗೆ ಉಪಯೋಗವಾಗುವಂತೆ ನಾವು ಬದುಕಿ ಮಾದರಿಯಾಗಬೇಕು. ಸಂಪತ್ತನ್ನು ನಾವು ಧರ್ಮಯುಕ್ತವಾಗಿ ಗಳಿಸಬೇಕು, ಧರ್ಮಯುಕ್ತವಾಗಿ ಉಳಿಕೆ ಮಾಡಿ, ಧರ್ಮಯುಕ್ತ ಬಳಕೆ ಮಾಡಿ ಸಮಾಜಮುಖಿಯಾಗಿದ್ದರೆ ಜೀವನದಲ್ಲಿ ಸಂತೃಪ್ತಿ ಮತ್ತು ಯಶಸ್ಸು ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಅವರು ಭಾನುವಾರ ದೇರಳಕಟ್ಟೆಯಲ್ಲಿ ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.






ಪ್ರಾಮಾಣಿಕತೆ ಮತ್ತು ಪಾರದರ್ಶಕ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯು ಉತ್ತಮ ಉದ್ದೇಶದಿಂದ ಆರಂಭಗೊಂಡಿದ್ದು, ಸಮಾಜಕ್ಕೆ ಬೆಳಕು ಮೂಡಿಸುವ ಪ್ರಯತ್ನದೊಂದಿಗೆ ಇದರ ಕೀರ್ತಿ ಇಡೀ ಜಗತ್ತಿಗೆ ಪಸರಿಸಲಿ ಎಂದು ಹೇಳಿದರು.
ಹೇರಂಭಾ ಇಂಡಸ್ಟೀಸ್ ಲಿ.ಮತ್ತು ಕೆಮಿನೋ ಫಾರ್ಮಾಲಿಯ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕೆಲವೇ ಜನ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸತೀಶ್ ಪಟ್ಲ ಅವರು ದೊಡ್ಡ ಕಲಾವಿದರರಾಗಿದ್ದುಕೊಂಡು ಕಲಾವಿದರ ಸಂಕಷ್ಟಕ್ಕೆ ನೆರವಾಗುವುದರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಮೂಲಕ ಮತ್ತಷ್ಟು ಜನಸೇವೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ದೇವೆಂದ್ರನಾಗಿ, ರಾಜನಾಗಿ ಮೆರೆಯುವ ಯಕ್ಷಗಾನ ಕಲಾವಿದ ನೈಜ ಬದುಕಿನಲ್ಲಿ ಸಂಕಷ್ಟದಲ್ಲಿದ್ದಾನೆ. ಇಂತಹ ತೊಂದರೆಯಲ್ಲಿರುವ ಕಲಾವಿದರ ನೆರವು ನೀಡಲು ಮುಂದಾದ ವ್ಯಕ್ತಿ ಎಂದರೆ ಸತೀಶ್ ಪಟ್ಲ ಅವರು. ಇಂತಹ ಸಮಾಜಮುಖಿ ವ್ಯಕ್ಯಿತ್ವದ ಜನರನ್ನು ಸದಾ ಬೆಂಬಲಿಸೋಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಯು.ಟಿ ಖಾದರ್ ವಹಿಸಿ ಮಾತನಾಡಿ, ಈಗಿನ ಕಾಲದಲ್ಲಿ ಎಲ್ಲವೂ ಇದ್ದರೂ ಜನರಿಗೆ ತಾಳ್ಮೆ ಕಡಿಮೆಯಾಗುತ್ತಿದೆ. ಆದರೆ ಯಕ್ಷಗಾನ ಅಥವಾ ಇತರ ಕಲೆಗಳಲ್ಲಿ ತೊಡಗಿಸಿಕೊಂಡವರು ತಾಳ್ನೆಯ ಜೀವನ ನಡೆಸುತ್ತಿರುವುದನ್ನು ನಾವು ನೋಡಬಹುದು. ಇದೀಗ ಯಕ್ಷಗಾನ ಕಲಾವಿದನೋರ್ವನ ಸಮಾಜಮುಖಿ ಕಾರ್ಯಕ್ಕೆ ಶುಭವಾಗಲಿ ಎಂದರು.
ಭದ್ರತಾ ಕೋಶದ ಉದ್ಘಾಟನೆಯನ್ನು ಪ್ರವರ್ತಕರಾದ ಐಕಲ ಹರೀಶ್ ಶೆಟ್ಟಿ ನೆರವೇರಿಸಿದರು. ಷೇರು ಸರ್ಟೀಫಿಕೇಟ್ ಅನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಸತೀಶ್ ಭಂಡಾರಿ ಬಿಡುಗಡೆಗೊಳಿಸಿದರು. , ಯಕ್ಷಧ್ರುವ ನಗದು ಪತ್ರವನ್ನು ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಸಹಕಾರ ಸಂಘಗಳ ಉಪನಿಬಂಧಕ ಎಸ್. ಎಸ್. ರಮೇಶ್ ಬಿಡುಗಡೆಗೊಳಿಸಿದರು. ಮಾಸಿಕ ಠೇವಣಿ ಖಾತೆ ಪುಸ್ತಕ ಬಿಡುಗಡೆಯನ್ನು ಕಂಫಟ್೯ ಇನ್ ಹೋಟೆಲ್ ಮಾಲಕ ಚಂದ್ರಹಾಸ ಶೆಟ್ಟಿ ನೆರವೇರಿಸಿದರು. ಉಳಿತಾಯ ಖಾತೆ ಪುಸ್ತಕವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಬಿಡುಗಡೆಗೊಳಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್ ಗಣಕ ಯಂತ್ರ ಉದ್ಘಾಟನೆಯನ್ನು ನೆರವೇರಿಸಿದರು.
ದೈಜಿವಲ್ಡ್ ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಶಶಿಧರ ಶೆಟ್ಟಿ ಬರೋಡಾ, ಸವಣೂರು ಸೀತಾರಾಮ ರೈ, ಸುರೇಶ್ ಭಂಡಾರಿ ಕಡಂದಲೆ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಸುಧಾಕರ ಪೂಂಜ, ಸಂತೋಷ್ ಕುಮಾರ್ ಶೆಟ್ಟಿ, ಪುರುಷೋತ್ತಮ ಭಂಡಾರಿ, ಗಿರೀಶ್ ಶೆಟ್ಟಿ, ರವಿಚಂದ್ರ ಶೆಟ್ಟಿ, ಲೋಕೇಶ್ ಪೂಜಾರಿ, ಆರತಿ ಆಳ್ವ, ಪ್ರಭಾರ ಪ್ರಧಾನ ವ್ಯವಸ್ಥಾಪಕಿ ತನುಜಾ, ಜೆ. ಅಡ್ಯಾಂತ್ತಾಯ, ಮೊದಲಾದವರು ಉಪಸ್ಥಿತರಿರುವರು.
ನಿರ್ದೆಶಕರಾದ ಸವಣೂರು ಸೀತರಾಮ ರೈ ಅವರು ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು.
ಸಮಾಜಮುಖಿ ಚಿಂತನೆಯೊಂದಿಗೆ ಈ ರಂಗಕ್ಕೆ ಇಳಿದಿದ್ದೇವೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಪಟ್ಲ ಫೌಂಡೇಶನ್ ಆರಂಭಿಸಿದ್ದೆವು. ಟ್ರಸ್ಟ್ ಆರ್ಥಿಕ ಶಕ್ತಿಯ ಮುನ್ನಡೆಗಾಗಿ ಹಾಗೂ ಎಲ್ಲಾ ರಂಗದ ಕಲಾವಿದರ ವಲಯದ ಅನುಕೂಲದ ಹಿತದೃಷ್ಟಿಯಿಂದ ಈ ಕೋಆಪರೇಟಿವ್ ಸೊಸೈಟಿಯ ಲಾಭಾಂಶವನ್ನು ಹಂಚುವ ಉದ್ದೇಶ ಇಟ್ಟುಕೊಂಡಿದ್ದೇವೆ.
ಪಟ್ಲ ಸತೀಶ್ ಶೆಟ್ಟಿ